1845-1921. ಬಂಗಾಳದ ಪ್ರಸಿದ್ಧ ವಕೀಲ, ವಿದ್ವಾಂಸ, ಸಮಾಜಸುಧಾರಕ, ಶಾಸನಕರ್ತ. ಎರಡು ಬಾರಿ ಭಾರತ ರಾಷ್ಟ್ರೀಯ ಕಾಂಗ್ರೆಸ್ಸಿನ ಅಧ್ಯಕ್ಷರಾಗಿದ್ದರು. 1845ರ ಡಿಸೆಂಬರ್ 23ರಂದು. ಬರ್ದ್ವಾನ್ ಜಿಲ್ಲೆಯ ತೋರೆಕೋನ ಗ್ರಾಮದಲ್ಲಿ ಜನಿಸಿದರು. ಅವರ ಮಲತಮ್ಮನ ಹೇಳಿಕೆಯ ಪ್ರಕಾರ ಅವರು ಹುಟ್ಟಿದ್ದು ಖಾಂದಘೋಷ್ನಲ್ಲಿ. ತೋರೆಕೋನ ಎಂಬುದು ಅವರ ಹಿರಿಯರ ಸ್ಥಳ. ರಾಷ್ ಬಿಹಾರಿ ಘೋಷರು ಜಗಬಂಧು ಘೋಷರ ಮೊದಲನೆಯ ಹೆಂಡತಿಯ ಮಗ. ಇವರದು ಮಧ್ಯಮವರ್ಗದ ಕಾಯಸ್ಥ ವಂಶ. ಸ್ಥಳೀಯ ಪಾಠಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿದ ಇವರು ಬರ್ದ್ವಾನ್ ರಾಜ್ ಕೊಲಿಜಿಯೆಟ್ ಶಾಲೆಯಲ್ಲಿ ವ್ಯಾಸಂಗ ಮುಂದುವರಿಸಿದರು. ಬಂಕುರದಿಂದ ಎಂಟ್ರನ್ಸ್ ಪರೀಕ್ಷೆಯಲ್ಲಿ ಉತ್ತಿರ್ಣರಾಗಿ ಕೋಲ್ಕತದ ಪ್ರೆಸಿಡೆನ್ಸಿ ಕಾಲೇಜ್ ಸೇರಿದರು. ಎಫ್.ಎ.ಯಲ್ಲಿ (1862) ಪ್ರಥಮ ಸ್ಥಾನವನ್ನೂ ಬಿ.ಎ.ಯಲ್ಲಿ (1865) ಎರಡನೆಯ ಸ್ಥಾನವನ್ನೂ ಗಳಿಸಿದ ಇವರು ಇಂಗ್ಲಿಷ್ ಎಂ.ಎ.ಯಲ್ಲಿ ಪ್ರಥಮ ಶ್ರೇಣಿಯನ್ನೂ ಚಿನ್ನದ ಪದಕವನ್ನೂ ಗಳಿಸಿದರು (1867). 1871ರಲ್ಲಿ ನ್ಯಾಯಶಾಸ್ತ್ರದ ಆನರ್ಸ್-ಇನ್-ಲಾ ಪರೀಕ್ಷೆಯಲ್ಲಿ ಉತ್ತೀರ್ಣರಾದ ಇವರಿಗೆ 1884ರಲ್ಲಿ ಡಾಕ್ಟರ್ ಆಫ್ ಲಾಸ್ ಪದವಿ ದೊರಕಿತು. ಇಂಗ್ಲೆಂಡಿನಲ್ಲಿ ಬ್ಯಾರಿಸ್ಟರ್ ಪದವಿ ಪಡೆಯಬೇಕೆಂಬುದು ಇವರ ಅಭಿಲಾಷೆಯಾಗಿತ್ತು. ಆದರೆ ಇವರು ಅಲ್ಲಿಗೆ ಹೋಗಲು ಇವರ ಬಂಧುಗಳು ಒಪ್ಪಲಿಲ್ಲ. ಕೋಲ್ಕತದಲ್ಲಿ ವಕೀಲರಾಗಿ ಇವರು ಚೆನ್ನಾಗಿ ಹಣ ಸಂಪಾದಿಸಿದರು.

ರಾಷ್ ಬಿಹಾರಿ ಘೋಷರಿಗೆ ಸಾಹಿತ್ಯದಲ್ಲಿ ವಿಶೇಷವಾದ ಅಭಿರುಚಿಯಿತ್ತು. ಕೋಲ್ಕತ್ತ ವಿಶ್ವವಿದ್ಯಾಲಯದೊಂದಿಗೆ ನಿಕಟ ಸಂಪರ್ಕ ಬೆಳೆಸಿಕೊಂಡ ಘೋಷರು 1879ರಲ್ಲಿ ಅದರ ಫೆಲೊ ಆದರು. 1893-1895ರವರೆಗೆ ನ್ಯಾಯಶಾಸ್ತ್ರ ವಿಭಾಗದ ಅಧ್ಯಕ್ಷರೂ 1887-1899ರಲ್ಲಿ ಸಿಂಡಿಕೇಟ್ ಸದಸ್ಯರೂ ಆಗಿದ್ದರು. ಗೋಖಲೆಯವರು ಪ್ರತಿಪಾದಿಸಿದ ಕಡ್ಡಾಯ ಶಿಕ್ಷಣ ಯೋಜನೆಯನ್ನು ಇವರೂ ಅನುಮೋದಿಸಿದರು. ಸ್ವದೇಶಿ ಚಳವಳಿಯ ಕಾಲದಲ್ಲಿ ಇವರು ರಾಷ್ಟ್ರೀಯ ಶಿಕ್ಷಣ ಚಳವಳಿಗೆ ಬೆಂಬಲ ಸೂಚಿಸಿದರು. 1906-1921ರಲ್ಲಿ ಇವರು ರಾಷ್ಟ್ರೀಯ ಶಿಕ್ಷಣ ಮಂಡಲಿಯ ಅಧ್ಯಕ್ಷರಾಗಿದ್ದರು. ಸ್ತ್ರೀವಿದ್ಯಾಭ್ಯಾಸವನ್ನು ಇವರು ವಿಶೇಷವಾಗಿ ಪ್ರೋತ್ಸಾಹಿಸಿದರು.

1905ರ ವರೆಗೂ ರಾಷ್ ಬಿಹಾರಿ ಘೋಷರು ನೇರವಾಗಿ ರಾಜಕೀಯವನ್ನು ಪ್ರವೇಶಿಸಲಿಲ್ಲ. ಅವರು ಆ ವರ್ಷ ಕಲ್ಕತ್ತ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ವೈಸ್ ರಾಯ್ ಲಾರ್ಡ್ ಕರ್ಜನ್ ಮಾಡಿದ ಕೆಲವು ಟೀಕೆಗಳ ವಿರುದ್ಧ ಪ್ರತಿಭಟಿಸಲು ಸೇರಿದ್ದ ಸಾರ್ವಜನಿಕ ಸಭೆಯ ಅಧ್ಯಕ್ಷತೆ ವಹಿಸಿದ್ದರು. 1906ರ ಅಂತ್ಯಭಾಗದಲ್ಲಿ ಕೋಲ್ಕತ್ತದಲ್ಲಿ ಸಮಾವೇಶಗೊಂಡಿದ್ದ ಕಾಂಗ್ರೆಸ್ ಅಧಿವೇಶನದ ಸ್ವಾಗತ ಸಮಿತಿಯ ಅಧ್ಯಕ್ಷರಾಗಿದ್ದರು. ಬಂಗಾಲದ ವಿಭಜನೆಯ ಹಿನ್ನೆಲೆಯಲ್ಲಿ ಸೇರಿದ ಸಭೆ ಸಂಪ್ರದಾಯದ ಸಮಾವೇಶಗಳಂತಿರಲಿಲ್ಲ. ಕಾಂಗ್ರೆಸ್ಸಿನ ಸದಸ್ಯರಲ್ಲಿ ಆ ಸಂಸ್ಥೆಯ ಧ್ಯೇಯದ ಬಗ್ಗೆ ಮತ್ತು ಅದನ್ನು ಸಾಧಿಸುವ ಮಾರ್ಗದ ವಿಚಾರದಲ್ಲಿ ಭಿನ್ನಾಭಿಪ್ರಾಯ ಮೂಡಿತ್ತÄ. ಸೌಮ್ಯವಾದಿಗಳು ಸೌಮ್ಯ ಮಾರ್ಗಗಳನ್ನು ಅನುಸರಿಸಬೇಕೆಂದೂ ಉಗ್ರಪಂಥಿಗಳು ಕ್ರಾಂತಿಕಾರಕ ದಾರಿಯನ್ನು ಹಿಡಿಯಬೇಕೆಂದೂ ಮಹಾಸಭೆಯನ್ನು ಒತ್ತಾಯಪಡಿಸಿದರು. ಹೀಗೆ ವಿಭಿನ್ನವಾದ ಅಭಿಪ್ರಾಯಗಳು ಕಲ್ಕತ್ತೆಯ ಅಧಿವೇಶನದಲ್ಲಿ ವ್ಯಕ್ತವಾದರೂ ಅಲ್ಲಿ ಸೌಮ್ಯವಾದಿ ಮತ್ತು ತೀವ್ರಗಾಮಿಗಳ ನಡುವೆ ಒಂದು ಒಡಂಬಡಿಕೆ ಆಯಿತು. ಈ ಒಪ್ಪಂದದ ಪರಿಣಾಮವಾಗಿ ಕಾಂಗ್ರೆಸ್ ತನ್ನ ಏಕತೆಯನ್ನು ಕಳೆದುಕೊಳ್ಳಲಿಲ್ಲ. ಸೌಮ್ಯವಾದಿಗಳ ವಾದವನ್ನು ಪ್ರತಿಬಿಂಬಿಸುವ ಸ್ವಾಗತ ಭಾಷಣವನ್ನು ರಾಷ್ ಬಿಹಾರಿ ಘೋಷ್ ಮಾಡಿದರು. ಅವರ ಭಾಷಣ ಮುಖ್ಯವಾಗಿ ಬಂಗಾಳದ ವಿಭಜನೆ, ಸ್ವದೇಶಿ, ರಾಷ್ಟ್ರೀಯ ವಿದ್ಯಾಭ್ಯಾಸ ಮತ್ತು ಬಹಿಷ್ಕಾರಗಳ ಕುರಿತದ್ದಾಗಿತ್ತು. 1907ರಲ್ಲಿ ಸೂರತ್ತಿನಲ್ಲಿ ಸೇರಿದ್ದ ಕಾಂಗ್ರೆಸ್ ಅಧಿವೇಶನಕ್ಕೆ ರಾಷ್ಬಿಹಾರಿ ಘೋಷ್ ಅಧ್ಯಕ್ಷರಾಗಿದ್ದರು. ತೀವ್ರಗಾಮಿಗಳು ಮತ್ತು ಸೌಮ್ಯವಾದಿಗÀಳ ನಡುವಣ ಭಿನ್ನತೆಯಿಂದಾಗಿ ಆ ಅಧಿವೇಶನಲ್ಲಿ ಗೊಂದಲವುಂಟಾಗಿ ಅದು ಅರ್ಧದಲ್ಲೇ ಕೊನೆಗೊಂಡಿತು. ಮರುವರ್ಷ ಚನ್ನೈನ ಅಧಿವೇಶನಕ್ಕೆ ಅವರು ಅಧ್ಯಕ್ಷರಾಗಿದ್ದರು.

ರಾಷ್ಬಿಹಾರಿ ಘೋಷ್ ಸೌಮ್ಯವಾದಿಗಳಾಗಿದ್ದರು. ಸ್ವದೇಶಿ ಚಳವಳಿಯಲ್ಲಿ ಅವರಿಗೆ ತುಂಬ ನಂಬಿಕೆಯಿತ್ತು. ವಿದೇಶೀಯರ ದ್ವೇಷವಿಲ್ಲದ, ಸ್ವದೇಶದ ಅಭಿಮಾನದಿಂದ ಕೂಡಿದ, ಸ್ವದೇಶಿ ಚಳವಳಿಯನ್ನು ಅವರು ಪ್ರತಿಪಾದಿಸುತ್ತಿದ್ದರು. ಸಂವಿಧಾನಬದ್ಧ ಕ್ರಮಗಳಿಂದಲೇ ಇದನ್ನು ಸಾಧಿಸಬಹುದೆಂಬುದು ಅವರ ನಂಬಿಕೆಯಾಗಿತ್ತು. ಭಾರತದಲ್ಲಿ ಬ್ರಿಟಿಷ್ ಆಡಳಿತ ಒಂದು ವರವೆಂದೇ ಅವರು ಭಾವಿಸಿದ್ದರು. ಬ್ರಿಟಿಷರು ಭಾರತಕ್ಕೆ ವಿಜೇತರಾಗಿ ಬರಲಿಲ್ಲ; ಅನಾಯಕತ್ವವನ್ನು ತೊಡೆದು ಸುವ್ಯವಸ್ಥೆ ಸ್ಥಾಪಿಸಲು ಬಂದರು. ಅದು ಈಗ ಸಾಧಿತವಾಗಿರುವುದರಿಂದ ಅವರು ಭಾರತಕ್ಕೆ ಸ್ವಯಮಾಡಳಿತ ಕೊಟ್ಟೇ ಕೊಡುತ್ತಾರೆ. ಬ್ರಿಟಿಷ್ ಸಾಮ್ರಾಜ್ಯದೊಳಗೆ ಸ್ವಯಮಾಡಳಿತ ಸ್ಥಾಪಿಸುವುದೇ ನಮ್ಮ ಗುರಿ-ಎಂಬುದು ಅವರ ಭಾವನೆಯಾಗಿತ್ತು.

ಬ್ರಿಟಿಷ್ ಸರ್ಕಾರ ಮುಕ್ತವ್ಯಾಪಾರ ತತ್ತ್ವಗಳನ್ನು ಅನುಸರಿಸುತ್ತಿರುವುದರಿಂದ ಅದು ಭಾರತದ ಕೈಗಾರಿಕೆಗಳಿಗೆ ರಕ್ಷಣೆ ದೊರಕಿಸಿಕೊಡಲಿಲ್ಲವೆಂದು ಅವರು ಭಾವಿಸಿದ್ದರು. ಆದ್ದರಿಂದ ಅವರು ಸ್ವದೇಶಿ ಚಳವಳಿಯ ಮೂಲಕ ಭಾರತದ ಆರ್ಥಿಕ ಹಿತಗಳನ್ನು ರಕ್ಷಿಸಲು ಯತ್ನಿಸಿದರು. ಬ್ರಿಟಷ್ ವಸ್ತುಗಳನ್ನು ಬಹಿಷ್ಕರಿಸುವುದರಿಂದ ಇದನ್ನು ಸಾಧಿಸಿದಂತಾಗುವುದಿಲ್ಲ. ದೇಶದ ಆರ್ಥಿಕ ಸ್ಥಿತಿಯನ್ನು ಉತ್ತಮಪಡಿಸುವುದರಿಂದ ಇದು ಸಾಧ್ಯ. ಭಾರತೀಯ ಕೈಗಾರಿಕೆಗಳಲ್ಲಿ ಬಂಡವಾಳವನ್ನು ತೊಡಗಿಸಬೇಕೆಂದು ಅವರು ಹೇಳಿದರಲ್ಲದೆ, ಅವರೇ ಒಂದು ಕೈಗಾರಿಕೆಗೆ ಧನಪೋಷಣೆ ಮಾಡಿದರು.
ರಾಷ್ಬಿಹಾರಿ ಘೋಷರು 1891-1896 ಮತ್ತು 1906-1907ರಲ್ಲಿ ಭಾರತ ವಿಧಾನಮಂಡಲಿಯ ಸದಸ್ಯರಾಗಿದ್ದರು. ಹಿಂದು ಮುಸ್ಲಿಂ ಕುಟುಂಬಗಳ ಪಾಲು, ಋಣಿಗಳು ತಮ್ಮ ಸ್ವತ್ತನ್ನು ಮತ್ತೆ ಕೊಳ್ಳುವ ಹಕ್ಕು ಮುಂತಾದ ಹಲವು ವಿಧೇಯಕಗಳನ್ನು ಕುರಿತ ಚರ್ಚೆಗಳಲ್ಲಿ ಅವರು ಭಾಗವಹಿಸಿದರು. ಸಿವಿಲ್ ಪ್ರಕ್ರಿಯಾ ಸಂಹಿತೆಯ ವಿಧೇಯಕದ ರಚನೆಯಲ್ಲಿ ಅವರು ವಹಿಸಿದ ಪಾತ್ರ ಪ್ರಮುಖವಾಗಿತ್ತು.

ರಾಷ್ ಬಿಹಾರಿ ಘೋಷರು ಬ್ರಿಟಿಷ್ ಸರ್ಕಾರದಲ್ಲಿ ನಂಬಿಕೆಯಿಟ್ಟಿದ್ದರೂ ಅದು ತಪ್ಪು ಹಾದಿಯಲ್ಲಿ ಹೋದಾಗ ಅದನ್ನು ಖಂಡಿಸದೆ ಇರಲಿಲ್ಲ. ಸರ್ಕಾರ 1907ರ ರಾಜದ್ರೋಹ ಅಧಿನಿಯಮವನ್ನು ಜಾರಿಗೆ ತಂದಾಗ ಅದರಿಂದ ಭಾರತದ ರಾಜಕೀಯ ಜೀವನವೇ ನಾಶವಾಗುವುದೆಂದು ಹೇಳಿ ಅವರು ಆ ಅಧಿನಿಯಮವನ್ನು ಬಲವಾಗಿ ವಿರೋಧಿಸಿದರು.

1909ರ ಅನಂತರ ರಾಷ್ಬಿಹಾರಿ ಘೋಷರು ರಾಜಕೀಯದಿಂದ ನಿವೃತ್ತಿ ಹೊಂದಿದರೆಂದು ಹೇಳಬಹುದು. ಅನಂತರ ಅವರು ರಾಷ್ಟ್ರೀಯ ವಿದ್ಯಾಭ್ಯಾಸದ ಕಡೆಗೆ ವಿಶೇಷ ಗಮನ ಹರಿಸಿದರು. ಅದನ್ನು ಜನರಲ್ಲಿ ಬೇರೂರಿಸಲು ದೇಶದಾದ್ಯಂತ ಪ್ರವಾಸ ಕೈಗೊಂಡು ತಮ್ಮ ಉದ್ದೇಶದಲ್ಲಿ ಬಹಳಮಟ್ಟಿಗೆ ಯಶಸ್ವಿಯಾದರು.

ರಾಷ್ಬಿಹಾರಿ ಘೋಷರು ತಮ್ಮ ಹಳ್ಳಿಯಾದ ತೋರೆಕೋನದ ಅಭಿವೃದ್ಧಿಗಾಗಿಯೂ ಹಲವಾರು ಶಿಕ್ಷಣ ಸಂಸ್ಥೆಗಳಿಗೂ ಒಟ್ಟು ಸುಮಾರು ಐವತ್ತು ಲಕ್ಷ ರೂ. ಗಳಷ್ಟು ದಾನ ಮಾಡಿದ್ದಾರೆ. ಅವರು 1921ರಲ್ಲಿ ತೀರಿಕೊಂಡರು. 	(ಕೆ.ಟಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ